ಚನ್ನಪಟ್ಟಣದ ಆಟಿಕೆ ಸಾಮಾನು, ಇಳಕಲ್‌, ಕಾಂಚೀಪುರಂ, ಬನಾರಸ್‌ ಸೀರೆ, ಕೊಲ್ಹಾಪುರ ಚಪ್ಪಲಿ ಸೇರಿದಂತೆ ದೇಶಿ ಕರಕುಶಲ ಜಗತ್ತಿನ ಪ್ರತಿಯೊಂದು ಸರಕಿಗೆ ಆನ್‌ಲೈನ್‌ ಮಾರುಕಟ್ಟೆ ಒದಗಿಸಿ ದೇಶ – ವಿದೇಶಗಳಲ್ಲಿ ವಹಿವಾಟು ‘ಐಷಿಪ್ಪೊಡಾಟ್‌ಕಾಂ’ ನಡೆಸುತ್ತಿದೆ. ನೇಕಾರರು, ಕರಕುಶಲ ಕಲಾವಿದರನ್ನು, ಮಧ್ಯವರ್ತಿಗಳ ಶೋಷಣೆಯಿಂದ ತಪ್ಪಿಸಿ ಅವರಿಗೆ ನ್ಯಾಯಯುತ ಬೆಲೆ ಒದಗಿಸಿ ಕೊಡಲು ಶ್ರಮಿಸುತ್ತಿರುವ ವಿಶಿಷ್ಟ ಸ್ಟಾರ್ಟ್‌ಅಪ್‌ ಇದಾಗಿದೆ.

ವಿಶ್ವದ ವಿವಿಧ ಮೂಲೆಗಳಲ್ಲಿ ಇರುವ ಖರೀದಿದಾರರು ಮತ್ತು ವಿನ್ಯಾಸಕರಿಗೆ ಸ್ಥಳೀಯ ಕಲಾವಿದರ ಜತೆ ನೇರ ಸಂಪರ್ಕ ಕಲ್ಪಿಸಿ  ವಹಿವಾಟು ವಿಸ್ತರಣೆಗೆ ನೆರವಾಗುತ್ತಿದೆ.ಆನ್‌ಲೈನ್‌ ವಹಿವಾಟಿನ (e- commerce) ಮುಂಚೂಣಿ ಸ್ಟಾರ್ಟ್‌ಅಪ್‌ಗಳಲ್ಲಿ ಒಂದೆಂದು ಅಮೆರಿಕದ ಟೆಕ್‌ನ್ಯೂಸ್ ಇಂಡಿಯಾದಿಂದ ಗುರುತಿಸಿಕೊಂಡಿರುವುದು ಇದರ ವಿಶೇಷತೆಯಾಗಿದೆ.

 ಕರಕುಶಲ ಸರಕುಗಳಿಗೆ ವಿಶ್ವದಾದ್ಯಂತ ಆನ್‌ಲೈನ್‌ ಮತ್ತು ಆಫ್‌ಲೈನ್ ಮಾರುಕಟ್ಟೆ ಒದಗಿಸಿರುವ ಐಷಿಪ್ಪೊಡಾಟ್‌ಕಾಂ (iShippo.com) ಅಂತರ್ಜಾಲ ತಾಣವು,  ಕೈಯಿಂದಲೇ ತಯಾರಿಸುವ ವೈವಿಧ್ಯಮಯ ಸರಕುಗಳ ಖರೀದಿ ಮತ್ತು   ಮಾರಾಟದ ಆನ್‌ಲೈನ್‌ ವೇದಿಕೆಯಾಗಿದೆ.

ದೇಶದ ವಿವಿಧ ಭಾಗಗಳಲ್ಲಿನ ಕರಕುಶಲ ಸರಕುಗಳ ಖರೀದಿದಾರರಿಗೆ ಅವರು ಇಷ್ಟಪಟ್ಟ ಸರಕನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ಈ ಸ್ಟಾರ್ಟ್‌ಅಪ್‌ ತೊಡಗಿದೆ.ಸದ್ಯಕ್ಕೆ ಬೆಂಗಳೂರಿನಲ್ಲಿಯೇ ನೆಲೆಸಿರುವ ಸಿಕ್ಕಿಂ ರಾಜ್ಯದವರಾದ ಕರ್ಮಾ ಭೂಟಿಯಾ (41)  ಅವರು ಈ  ಸ್ಟಾರ್ಟ್‌ಅಪ್‌ನ ಸ್ಥಾಪಕರಾಗಿದ್ದಾರೆ.

ವಿಶ್ವದ ಎಲ್ಲೆಡೆ ಈಗ ಯಾಂತ್ರೀಕರಣ ವೇಗವಾಗಿ ನಡೆಯುತ್ತಿದೆ. ಉಗಿ ಬಂಡೆ,   ವಿದ್ಯುತ್‌ ಉತ್ಪಾದನೆ, ಮಾಹಿತಿ ತಂತ್ರಜ್ಞಾನ ಕ್ರಾಂತಿ ನಂತರ ಈಗ ಯಂತ್ರ ಮಾನವ ಮತ್ತು ಕೃತಕ ಬುದ್ಧಿಮತೆಯ ಕ್ರಾಂತಿ ಕಾಲಿಡುತ್ತಿದೆ. ಕಂಪ್ಯೂಟರ್‌ ನಿಯಂತ್ರಿತ ಕಾರು, ರೈಲ್ವೆಗಳ ಓಡಾಟ ಕೆಲವೇ ದಿನಗಳಲ್ಲಿ ಸಾಕಾರಗೊಳ್ಳಲಿದೆ.

ಮಾಹಿತಿ ತಂತ್ರಜ್ಞಾನ ಕ್ರಾಂತಿಯಲ್ಲಿ– ಮಾನವ ಯಂತ್ರಗಳನ್ನು ನಿರ್ವಹಿಸುತ್ತಿದ್ದ.  ಈಗ ‘ಕೃತಕ ಬುದ್ಧಿಮತ್ತೆ’ ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ದಿನಗಳು ಬಂದಿವೆ.ಇದರಿಂದ ವಿಶ್ವದಾದ್ಯಂತ ಕ್ರಮೇಣ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿವೆ.  ಕರಕುಶಲ ಸರಕುಗಳ ತಯಾರಿಕಾ ರಂಗದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಅವುಗಳನ್ನು ಬಳಸಿಕೊಳ್ಳಲು ಸರಕುಗಳ ಮಾರುಕಟ್ಟೆಯೂ ವಿಸ್ತಾರಗೊಳ್ಳಬೇಕಾಗಿದೆ. ಇದಕ್ಕೆ ತಂತ್ರಜ್ಞಾನದ ನೆರವೂ ಬೇಕಾಗುತ್ತದೆ. ಅಂತಹ ಸೌಲಭ್ಯವನ್ನು ಈ ಸ್ಟಾರ್ಟ್‌ಅಪ್‌  ಒದಗಿಸಿಕೊಟ್ಟಿದೆ.

ಅತಿಯಾದ ಯಾಂತ್ರೀಕರಣದ ಭರಾಟೆಯಲ್ಲಿ ಸಾಂಪ್ರದಾಯಿಕ, ದೇಶಿ ಸೊಗಡಿನ ಕಲೆಗಳೂ ಮರೆಯಾಗುತ್ತಿವೆ.  ಕಲಾವಿದರು ಅನೇಕ ಕಾರಣಗಳಿಗೆ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಹೊಸ ತಲೆಮಾರಿನವರಲ್ಲಿ ಕುಟುಂಬ, ಸಮುದಾಯದ ಕರಕುಶಲ ವೃತ್ತಿ ಮುಂದುವರೆಸುವ ಕಾಳಜಿ ಕಾಣಿಸುತ್ತಿಲ್ಲ.ಅವರೆಲ್ಲ ಧಾವಂತದ ಬದುಕಿನ, ನಗರೀಕರದ ಪ್ರಭಾವದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾರೆ.  

ಸುಲಭ ಜೀವನೋಪಾಯದ ಮೊರೆ ಹೋಗುತ್ತಿದ್ದಾರೆ. ತಯಾರಿಸಿದ ಸರಕುಗಳಿಗೆ ಸೂಕ್ತ ಬೆಲೆ ಸಿಗದೆ, ಮಧ್ಯವರ್ತಿಗಳ ಶೋಷಣೆಯಿಂದ  ಬೇಸತ್ತಿರುವ ಕಲಾವಿದರು ತಮ್ಮ ವೃತ್ತಿಗೆ  ಬೆನ್ನು ಮಾಡುತ್ತಿದ್ದಾರೆ. ಯಾಂತ್ರೀಕರಣದ   ಪ್ರಭಾವ ಮತ್ತು ವೃತ್ತಿಯಿಂದ ವಿಮುಖರಾಗುತ್ತಿರುವ ಕಲಾವಿದರ ಬೆಂಬಲಕ್ಕೆ ನಿಂತು ಕರಕುಶಲ ಕಲೆಗಳನ್ನು  ಉಳಿಸಿ ಬೆಳೆಸುವ ಸರ್ಕಾರದ ಪ್ರಯತ್ನಗಳಿಗೆ ಈ ಸ್ಟಾರ್ಟ್‌ಅಪ್‌ ಕೈಜೋಡಿಸಿದೆ.

ಪರಂಪರಾಗತ ಕರಕುಶಲ ಸರಕುಗಳ ಮಾರಾಟ ಮಾಡಲು, ಪಟ್ಟಣದಿಂದ ಪಟ್ಟಣಕ್ಕೆ ಅಲೆಯುವ, ವಸ್ತುಪ್ರದರ್ಶನಗಳಿಗೆ ಎಡತಾಕುವ ಸಹನೆ  ಇಲ್ಲದ ಹೊಸ ಪೀಳಿಗೆಯ ಕಲಾವಿದರಿಗೆ  ತಂತ್ರಜ್ಞಾನದ ನೆರವಿನ ಮೂಲಕ ಅವರ ಬದುಕಿನಲ್ಲಿ ಭರವಸೆ ಮೂಡಿಸಲೂ ಈ ಸ್ಟಾರ್ಟ್‌ಅಪ್‌ ನೆರವಾಗುತ್ತಿದೆ. ಗ್ರಾಮೀಣ ಪ್ರದೇಶದ ಕಲಾವಿದರಿಗೆ  ವಿಶ್ವದಾದ್ಯಂತ ಗ್ರಾಹಕರನ್ನು ಹುಡುಕಿಕೊಡುವ, ನ್ಯಾಯಯುತ ಬೆಲೆ ಒದಗಿಸುವ ವಿಶಿಷ್ಟ ಕಾರ್ಯದಲ್ಲಿ ಈ ಸ್ಟಾರ್ಟ್‌ಅಪ್‌ ತೊಡಗಿಕೊಂಡಿದೆ.

ಕರ್ನಾಟಕ, ಪಶ್ಚಿಮ ಬಂಗಾಳ, ರಾಜಸ್ತಾನ, ಉತ್ತರ ಪ್ರದೇಶ,  ತಮಿಳುನಾಡು, ದೆಹಲಿ, ಈಶಾನ್ಯ ಭಾರತದ ರಾಜ್ಯಗಳ ವೈವಿಧ್ಯಮಯ ಕರಕುಶಲ ಸರಕುಗಳು ಒಂದೆಡೆಯೇ ಮಾರಾಟ ವೇದಿಕೆ ಒದಗಿಸಿರುವುದು ಈ ಆನ್‌ಲೈನ್‌ ವಹಿವಾಟಿನ ಹೆಗ್ಗಳಿಕೆಯಾಗಿದೆ.  ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಜತೆಗೂ  ಐಷಿಪ್ಪೊ ಕೈಜೋಡಿಸಿದೆ.

'ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಅದರಲ್ಲೂ ವಿಶೇಷವಾಗಿ ಅಮೆರಿಕ, ಬ್ರಿಟನ್‌, ಜರ್ಮನಿಗಳಿಂದ ದೇಶಿ ಕರಕುಶಲ ಸರಕುಗಳಿಗೆ ಅಪಾರ ಬೇಡಿಕೆ ಇದೆ' ಎಂದು ಭಾಟಿಯಾ ಹೇಳುತ್ತಾರೆ.

2015ರ ಏಪ್ರಿಲ್‌ನಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಸ್ಟಾರ್ಟ್‌ಅಪ್‌, ಕೇಂದ್ರ ಸರ್ಕಾರದ ಕರಕುಶಲ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ  ಕಾರ್ಯನಿರ್ವಹಿಸುತ್ತಿದೆ. ಕರಕುಶಲ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರದಿಂದ ಅಧಿಕೃತ ಮಾನ್ಯತೆಯನ್ನೂ ಪಡೆದಿದೆ.

ಕರಕುಶಲ ಕಲಾವಿದರು, ಕಲಾವಿದರ ಸ್ವಸಹಾಯ ಸಂಘಗಳು, ಕರಕುಶಲ ಉತ್ಪನ್ನಗಳಿಗೆ ಸಂಬಂಧಿಸಿದ ಸಹಕಾರಿ ಸಂಘಗಳು,  ಕರಕುಶಲ ಕಲಾವಿದರ  ಒಳಿತಿಗಾಗಿ ಶ್ರಮಿಸುತ್ತಿರುವ  ಸ್ವಯಂ ಸೇವಾ ಸಂಘಟನೆಗಳು,  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಸ್ಟಾರ್ಟ್‌ಅಪ್‌ ಕಾರ್ಯನಿರ್ವಹಿಸುತ್ತಿದೆ.

'ಕಲಾವಿದರಿಗೆ ಗರಿಷ್ಠ ಪ್ರಯೋಜನ  ದೊರೆಯುವ ಉದ್ದೇಶದಿಂದ  ಸರ್ಕಾರ ನಿಗದಿ ಮಾಡಿರುವ ವಹಿವಾಟಿನ ನಿಯಮಗಳಿಗೆ ಅನುಗುಣವಾಗಿಯೇ ಈ ತಾಣದಲ್ಲಿ   ವ್ಯಾಪಾರ ನಡೆಯುತ್ತಿದೆ. ಕಲಾವಿದರು ಮತ್ತು ಸಹಕಾರಿ ಸಂಘಗಳು ನಿಗದಿ ಮಾಡಿದ ಬೆಲೆಮಟ್ಟಕ್ಕೆ ಸರಕುಗಳನ್ನು ಮಾರಾಟ ಮಾಡಲಾಗುತ್ತಿದೆ. ಬೆಲೆ ವಿಷಯದಲ್ಲಿ 'ಐಷಿಪ್ಪೊ ' ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ' ಎಂದು ಭೂಟಿಯಾ ಸ್ಪಷ್ಟಪಡಿಸುತ್ತಾರೆ.

'ಈ ತಾಣದಲ್ಲಿ ಮಾರಾಟವಾಗುವ ಸರಕುಗಳಿಗೆ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನಷ್ಟೇ ವಸೂಲಿ ಮಾಡಲಾಗುವುದು' ಎಂದೂ ಅವರು ಹೇಳುತ್ತಾರೆ.ಗ್ರಾಹಕರು ತಮಗೆ ಇಷ್ಟವಾದ ವಿನ್ಯಾಸದ ಸರಕುಗಳ ತಯಾರಿಕೆಗೆ ಕೋರಿಕೆ ಸಲ್ಲಿಸಲೂ ಈ ತಾಣ ನೆರವಾಗುತ್ತಿದೆ.  ಗ್ರಾಹಕರು ಬಯಸುವ ಇಂತಹ ವಿಶಿಷ್ಟ ವಿನ್ಯಾಸದ ಸರಕುಗಳನ್ನು    ಸಗಟು ರೂಪದಲ್ಲಿ ಖರೀದಿಸಬೇಕಾಗುತ್ತದೆ ಎನ್ನುವ ನಿಬಂಧನೆ ಇದೆ.

'ಗ್ರಾಹಕರ ದೃಷ್ಟಿಯಿಂದ ಇಲ್ಲಿರುವ ಹೆಚ್ಚಿನ ಅನುಕೂಲಕತೆ ಏನೆಂದರೆ–  ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸರಕು ತಯಾರಿಸಿ ಕೊಡಲಾಗುವುದು.  ಮನೆ, ಕಚೇರಿಗಳ ಒಳಾಂಗಣ ವಿನ್ಯಾಸಕಾರರೂ ತಮ್ಮ ಹಲವಾರು ಕನಸುಗಳನ್ನು ನನಸಾಗಿಸಿಕೊಳ್ಳಲು ಈ ತಾಣ  ನೆರವಿಗೆ ಬರುತ್ತದೆ' ಎಂದು ಭೂಟಿಯಾ ಹೇಳುತ್ತಾರೆ.

ಕೇಂದ್ರ ಜವಳಿ ಸಚಿವಾಲಯವೂ ಇವರ ಕೈಂಕರ್ಯದಲ್ಲಿ ಕೈಜೋಡಿಸಿದೆ.  ತಮ್ಮ ಪ್ರಯತ್ನಗಳಿಗೆ ಕೇಂದ್ರ ಸರ್ಕಾರದ ನೆರವು ಉತ್ತೇಜಕರವಾಗಿದೆ ಎಂದೂ ಅವರು ಹೇಳುತ್ತಾರೆ.

ಸರಕುಗಳ ತಯಾರಿಕೆಗೆ ಕಲಾವಿದರಿಗೆ  ಹಣದ ಕೊರತೆ ಎದುರಾದಾಗ ಅವರಿಗೆ ಸುಲಭವಾಗಿ ಬ್ಯಾಂಕ್‌ ಸಾಲ ದೊರೆಯಲು ಅಗತ್ಯವಾದ ಶಿಫಾರಸನ್ನೂ ಇವರು ಮಾಡುತ್ತಾರೆ. 'ಮುದ್ರಾ ಯೋಜನೆ'ಯಡಿ ಬ್ಯಾಂಕ್‌ ಸಾಲದ ನೆರವು ಪಡೆಯಲು ನೆರವಾಗುತ್ತಾರೆ.

'ಕರಕುಶಲ ಕಲಾವಿದರ ಬದುಕಿಗೆ ಸಾಧ್ಯವಾದಷ್ಟು ನೆರವು ನೀಡುವುದು, ಅವರ ಉತ್ಪನ್ನಗಳಿಗೆ ಗ್ರಾಹಕರನ್ನು ಒದಗಿಸಿ ನ್ಯಾಯಯುತ ಬೆಲೆ ಒದಗಿಸಿಕೊಡುವುದೇ ನನ್ನ ಮುಖ್ಯ ಧ್ಯೇಯವಾಗಿದೆ' ಎಂದು ಭೂಟಿಯಾ ಹೇಳುತ್ತಾರೆ. ‘ಪ್ರತಿಯೊಂದು ದೊಡ್ಡ ಸಂಗತಿಯು ಸಣ್ಣ ಆರಂಭ ಕಂಡಿರುತ್ತದೆ’ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟಿರುವ ಭೂಟಿಯಾ,   ಸಣ್ಣ, ಸಣ್ಣ ದೃಢ ಹೆಜ್ಜೆ ಇಡುತ್ತ ಸಾಗುತ್ತಿದ್ದಾರೆ. 

ಸಾಫ್ಟ್‌ವೇರ್‌ ಉದ್ಯಮದಿಂದ ಸ್ಟಾರ್ಟ್‌ಅಪ್‌ಗೆ...
ಮಾಹಿತಿ ತಂತ್ರಜ್ಞಾನ ವೃತ್ತಿ ಹಿನ್ನೆಲೆಯ ಕರ್ಮಾ ಭೂಟಿಯಾ ಮೂಲತಃ  ಸಾಫ್ಟ್‌ವೇರ್‌ ಉದ್ಯಮಿ. 12 ವರ್ಷಗಳ ಹಿಂದೆ ಸಾಫ್ಟ್‌ವೇರ್‌ ಸೇವಾ ಸಂಸ್ಥೆ ಸೋರ್ಸೆನ್‌ (sourcen) ಸ್ಥಾಪಿಸಿದ್ದ ಇವರು, ಇಲ್ಲಿಯವರೆಗೆ ಹಲವಾರು ಸ್ಟಾರ್ಟ್‌ಅಪ್‌ಗಳಿಗೆ ಅಗತ್ಯವಾದ ಮೊಬೈಲ್‌ ಆ್ಯಪ್‌ಗಳನ್ನೂ ಅಭಿವೃದ್ಧಿಪಡಿಸಿದ್ದಾರೆ. ಕ್ಲಿಯರ್‌ ಟ್ರಿಪ್‌, ಹಾಲಿಡೇ ಐಕ್ಯೂ, ಗಿಫ್ಟ್‌ ಬಿಗ್‌, ಟ್ಯಾಕ್ಸಿ ಫಾರ್‌ ಶೂರ್‌ಗೆ ಆ್ಯಪ್‌ ಒದಗಿದ  ಹೆಗ್ಗಳಿಕೆ ಇವರದು.

2004ರಲ್ಲಿ ಬೆಂಗಳೂರಿಗೆ ಬಂದಿರುವ ಬೂಟಿಯಾ, ಈಗ ಬೆಂಗಳೂರಿನವರೇ ಆಗಿದ್ದಾರೆ. ಐಷಿಪ್ಪೊದ ಪ್ರಧಾನ ಕಚೇರಿಯೂ, ಸ್ಟಾರ್ಟ್‌ಅಪ್‌ ರಾಜಧಾನಿ ಬೆಂಗಳೂರಿನಲ್ಲಿಯೇ ಇದೆ. ಆ್ಯಪಲ್‌, ಎಚ್‌ಪಿ, ಡೆಲ್‌, ಇಂಟೆಲ್‌, ಎಸ್‌ಎಪಿ,  ಜಬಾಂಗ್‌ ಮತ್ತು  ವಿಶ್ವಬ್ಯಾಂಕ್‌ ಜತೆಗೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

ಸಾಫ್ಟವೇರ್‌ ಉದ್ಯಮಿಯಾಗಿ ಇತರರಿಗೆ   ಸೇವೆ ಸಲ್ಲಿಸುವ ಮತ್ತು ಆ್ಯಪ್‌ ಅಭಿವೃದ್ಧಿಪಡಿಸುವುದರಿಂದ ಬೇಸತ್ತ ಇವರು ತಮಗೆ ಹೆಚ್ಚು ಇಷ್ಟವಾದ ಕರಕುಶಲ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಸ್ಟಾರ್ಟ್‌ಅಪ್‌ ಆರಂಭಿಸಿ ಒಂದೊಂದೆ ಯಶಸ್ಸಿನ ಮೆಟ್ಟಿಲು ಏರುತ್ತಿದ್ದಾರೆ.

ಸಾಫ್ಟ್‌ವೇರ್‌ ಸೇವಾ ಉದ್ಯಮದಲ್ಲಿ   ಬೇರೆಯವರಿಗೆ ಸೇವೆ ಸಲ್ಲಿಸುವುದೇ ಮುಖ್ಯವಾಗಿತ್ತು. ಇತರ ಉದ್ದಿಮೆ ಸಂಸ್ಥೆಗಳಿಗೆ ಸೇವೆ ಸಲ್ಲಿಸುವುದರಿಂದ ಗಮನ ಬದಲಿಸಿ ಕರಕುಶಲ ಕಲಾವಿದರಿಗೆ ನೆರವಾಗಲು ಈ ಸ್ಟಾರ್ಟ್‌ಅಪ್‌ ಆರಂಭಿಸಿದ್ದಾರೆ.

ಸಿಕ್ಕಿಂನ ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಭೂಟಿಯಾ ಅವರಿಗೆ ನೆಲದ ಸೊಗಡು, ಸಂಸ್ಕೃತಿ, ಪರಂಪರೆ ಬಗ್ಗೆ ವಿಶೇಷ ಕಾಳಜಿ ಇದೆ.  ವಿಶಾಲವಾದ ಮಾರುಕಟ್ಟೆಯ ಅವಕಾಶದಿಂದ ವಂಚಿತರಾದ, ಮಧ್ಯವರ್ತಿಗಳ ಶೋಷಣೆಗೆ ಒಳಗಾದ, ನ್ಯಾಯಯುತ ಬೆಲೆ ಸಿಗದೆ ನಿರಾಶರಾದ ಗ್ರಾಮೀಣ  ಪ್ರದೇಶದ ಕರಕುಶಲ ಕಲಾವಿದರಿಗೆ ನೆರವಾಗುವ ಸದುದ್ದೇಶದಿಂದ ಈ ನವೋದ್ಯಮಕ್ಕೆ ಕೈಹಾಕಿದ್ದಾರೆ. ಕರಕುಶಲ ಸರಕುಗಳ ವಹಿವಾಟಿನ ಸ್ವರೂಪ ಬದಲಿಸಲು ತಂತ್ರಜ್ಞಾನದ, ಪರಿಣತರ ನೆರವು ಪಡೆದು ಈ ತಾಣ ಅಭಿವೃದ್ಧಿಪಡಿಸಿ, ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಉತ್ಪನ್ನ ವೈವಿಧ್ಯ...
ಆಭರಣ, ಜವಳಿ, ಗೃಹಾಲಂಕಾರ, ಸೌಂದರ್ಯ  ಪ್ರಸಾಧನ, ಅಡುಗೆ ಮನೆ ಪರಿಕರ, ಇಳಕಲ್‌ ಸೀರೆ, ಗದ್ವಾಲ್  ಫ್ಯಾನ್ಸಿ ಸೀರೆ, ಕಾಂಜೀವರಂ ರೇಷ್ಮೆ ಸೀರೆ ಮುಂತಾದ ವೈವಿಧ್ಯಮಯ ಸರಕುಗಳು ಇಲ್ಲಿ ಖರೀದಿಗೆ ಲಭ್ಯ ಇವೆ.